ಜಾಗತೀಕರಣದ ಆತಂಕಗಳು

ಜಾಗತೀಕರಣದ ಆತಂಕಗಳು

ಜಾಗತೀಕರಣದ ಆತಂಕಗಳು ಅಸಂಖ್ಯ. ಅವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸ್ಪಷ್ಟವಾಗತೊಡಗಿವೆ. ಆದರೂ ಬಹುಜನ ಸಮುದಾಯದ ಪ್ರಜ್ಞಾಂತರಂಗದಲ್ಲಿ ಇವನ್ನು ಕುರಿತ ಕ್ರಿಯಾತ್ಮಕ ತಿಳುವಳಿಕೆಗೆ ಬರ ಇರುವುದು ವ್ಯಕ್ತವಾಗುತ್ತದೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಶೇ. ೪೦ಕ್ಕೂ ಮೀರಿ ಅನಕ್ಷರತೆಯನ್ನು ನಾವು ೫೩ ವರ್ಷಗಳನ್ನು ಗತಿಸಿರುವ ಸ್ವಾತಂತ್ರ್ಯೋತ್ತರ ಭಾರತದಲ್ಲೂ ಉಳಿಸಿಕೊಂಡಿರುವುದಾಗಿದೆ.

ಒಟ್ಟಾರೆ ಜಾಗತೀಕರಣದ ಆತಂಕಗಳ ಸ್ಪಷ್ಟ ಗಂಗೋತ್ರಿ ೧೯೯೧ರ ಭಾರತದಲ್ಲಿ ಇದೆ. ಆದರೆ, ಆ ಕುರಿತ ಕೂಗು ವ್ಯಾಪಕವಾಗಲಾರಂಭಿಸಿದ್ದು ಮಾತ್ರ ಅನಂತರದ, ಅದರಲ್ಲೂ ೯೫ರ ಈಚೆಗಿನ ವರ್ಷಗಳಲ್ಲಿ. ಇದು ಸಹಜ. ಕಾರಣ, ಗಂಭಿರ ವಿಚಾರಗಳಿಗೆ ಚಲನೆ ಕಡಿಮೆ. ಅಗ್ಗದ ಜನಪ್ರಿಯತೆ ಮತ್ತು ಮನರಂಜನೆಯ ಮಾದರಿಗಳ ಸಾಮ್ರಾಜ್ಯವಾಗಿರುವ ಮಧ್ಯಮ ವರ್ಗದವರ ದೇಶದಲ್ಲಿ ಜಾಗತೀಕರಣದ ಆತಂಕಗಳನ್ನು ಕುರಿತ ಮಾತುಗಳು ಮೊದಲಿಗೆ ಪ್ರತಿಗಾಮಿಯ ಮಾತುಗಳಾಗಿಯೇ ಕೇಳಿಬರುತ್ತವೆ. ಆದ್ದರಿಂದಲೇ ಜನರೇ ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹ ಭಾರತದ ಹಿಮಾಲಯವನ್ನು ಒಡೆದು, ವಿದೇಶಿ ಕಂಪೆನಿಗಳ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲು ಸುಲಭವಾಗಿ ಸಾಧ್ಯವಾದದ್ದು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದ ಪಕ್ಷಗಳ ಹೆಸರುಗಳು ಬೇರೆ ಬೇರೆಯಾಗಿದ್ದರೂ ಆ ಎಲ್ಲದರ ಕ್ರಿಯಾರೂಪಿ ತಾತ್ವಿಕತೆ ಒಂದೇ ಆಗಿತ್ತು ಎಂಬುದು ಸ್ಪಷ್ಟ. ಆದ್ದರಿಂದ ಜಾಗತೀಕರಣದ ಪ್ರಕ್ರಿಯೆ ಭಾರತದಲ್ಲಿ ನಿರಂತರತೆಯನ್ನು ಉಳಿಸಿಕೊಂಡು ಊರ್ಧ್ವಮುಖಿಯಾಗಿ ಸಾಗಲು ಸಹಾಯಕವಾಯಿತು.

ಇಂತಹ ಸನ್ನಿವೇಶದಲ್ಲಿ ಇಲ್ಲೊಂದು ಅಸಂಗತ ನಡೆಯುತ್ತಿದೆ. ಅದರ ನಾಯಕ ಪ್ರಧಾನಿ ವಾಜಪೇಯಿ. ಅವರು ಇತ್ತೀಚೆಗೆ ಜಾಗತೀಕರಣದಿಂದ ಭಾರತಕ್ಕೆ ಅಪಾಯವಿದೆ. ಅದರ ಬಗ್ಗೆ ನಾವು ಎಚ್ಚರವಾಗಿರಬೇಕು ಎಂದು ಮಾತನ್ನು ಆಡಿದ್ದಾರೆ. ಇರಲಿ, ಆದರೆ ಈ ಮಾತನ್ನು ಕೇಳಿ ಪ್ರಜ್ಞೆವಂತ ಜನತೆ ಸಂತೋಷ ಪಡಬೇಕೋ, ವಿಷಾದ ವ್ಯಕ್ತಪಡಿಸಬೇಕೋ ಗೊತ್ತಾಗುತ್ತಿಲ್ಲ. ಕಾರಣ, ಈ ಮಾತನ್ನು ಈ ಹತ್ತು ವರ್ಷಗಳಲ್ಲಿ ಈಗ ಮಾತ್ರ ಹೇಳುತ್ತಿರುವವರು ದೇಶದ ಪ್ರಧಾನಿಯೇ ವಿನಃ ಬೇರೆ ಯಾರೂ ಅಲ್ಲ. ಆದರೂ ಈ ಮಾತನ್ನು ಆಡಿದ ಅವರೇ ಇಂದಿಗೂ ದೇಶವನ್ನು ಅದೇ ದಿಕ್ಕಿನಲ್ಲಿಯೇ ಕೊಂಡೊಯ್ಯುತ್ತಿರುವುದು ವಿಪರ್‍ಯಾಸ ಎನ್ನಿಸಿದೆ.
ಅಂತೂ ಭಾರತವು ಪ್ರಪಂಚವಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾರತದ ಪ್ರಜಾಸತ್ತಾತ್ಮಕತೆಯು ಉದಾರೀಕರಣ, ವ್ಯಾಪಾರೀಕರಣ, ಖಾಸಗೀಕರಣ ಎಂಬ ಸೋದರ ‘ಕರಣ’ಗಳ ಎದುರಿನಲ್ಲಿ ಮರಣದ ಹಾದಿ ಹಿಡಿಯುತ್ತಿದೆ. ಇದರ ಇಕ್ಕೆಲಗಳಲ್ಲಿ ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮೊದಲಾದವರು ಮೂಕರಾಗಿ ನಿಂತು, ಪ್ರತಿಮೆಗಳಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಂತರ ರಾಷ್ಟ್ರೀಯ ವ್ಯಾಪಾರಕ್ಕೆ ಈಡಾಗಿದ್ದಾರೆ. ಈ ತಾತ್ವಿಕ ನೆಲೆಯಲ್ಲಿ ಭಾರತದ ಪ್ರಗತಿಗಾಮಿಯ ಅನನ್ಯತೆಗೆ ಒದಗಿರುವ ಆತಂಕಗಳನ್ನು ಕುರಿತ ಚರ್ಚೆ ವಿಭಾಗೀಕರಣದ ಮೂಲಕ ಇಲ್ಲಿ ಸಾಗುತ್ತದೆ.

ಭಾಷೆ ಮತ್ತು ಸಂಸ್ಕೃತಿಯ ನೆಲೆ

ಜಾಗತೀಕರಣಕ್ಕೆ ಈಡಾಗುತ್ತಿರುವ ಭಾರತದಲ್ಲಿ ದೇಶ ಭಾಷೆಗಳು ತೀವ್ರ ಆತಂಕಕ್ಕೆ ಈಡಾಗುತ್ತಿವೆ. ಕಾರಣ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಗ್ಲೀಷಿಗೆ ಯಜಮಾನನ ಸ್ಥಾನ ಒದಗಿರುವುದರಿಂದ ದೇಶಭಾಷೆಗಳಿಗೆ ಅಲ್ಲಿ ಮಾರುಕಟ್ಟೆಯ ಮೌಲ್ಯ ಉಳಿದಿಲ್ಲವಾಗಿದೆ. ಇದರ ಜೊತೆಗೆ ಇಂಗ್ಲೀಷನ್ನು ಕುರಿತ ಮೇಲರಿಮೆ ಮತ್ತು ಅದರ ಎದುರಿನಲ್ಲಿ ದೇಶಭಾಷೆಗಳನ್ನು ಕುರಿತ ಕೀಳರಿಮೆ ಸ್ವದೇಶಿ ಮತ್ತು ವಿದೇಶಿ ಜನರಿಂದ ಒಟ್ಟೊಟ್ಟಿಗೆ ಜನರ ಪ್ರಜ್ಞೆಯ ಭಾಗವಾಗುತ್ತಿದೆ. ಆದ್ದರಿಂದ ಪ್ರಗತಿ, ಜ್ಞಾನ ಮುಂತಾದ ಸಂಗತಿಗಳು ಇಂಗ್ಲೀಷಿಗೆ ಗುತ್ತಿಗೆ ಎಂಬ ಭ್ರಮೆ ಎಲ್ಲೆಡೆಗೂ ವ್ಯಾಪಿಸಲಾರಂಭಿಸಿದೆ. ಪರಿಣಾಮವಾಗಿ ದೇಶಭಾಷೆಗಳನ್ನಾಡುವ ಜನತೆ ಆಂಗ್ಲ ಮಾಧ್ಯಮಕ್ಕೆ ತಮ್ಮ ತಲೆಗಳನ್ನು ಒಪ್ಪಿಸುತ್ತಿದೆ. ಇದಕ್ಕೆ ಇವರಲ್ಲಿ ಇನ್ನೂ ಉಳಿದಿರುವ ಹಳೆಯ ಬ್ರಿಟಿಷ್‌ರ ಬಗೆಗಿನ ಸುಪ್ತ ಗುಲಾಮಗಿರಿಯೂ ಪೋಷಕವಾಗಿದೆ.

ಈ ಎಲ್ಲದರ ಪರಿಣಾಮದಿಂದ ವ್ಯಾಪಾರೀಮುಖಿ ಶಿಕ್ಷಣ ವ್ಯಾಪಕವಾಗಲಾರಂಭಿಸಿದೆ. ಇಂತಹ ಪ್ರಕ್ರಿಯೆಯಿಂದ ಜ್ಞಾನ ಮತ್ತು ಜನಮುಖಿಯಾದ ಶಿಕ್ಷಣಕ್ಕೆ ಧಕ್ಕೆಯುಂಟಾಗಿ, ಮತ್ತೊಂದು ವಿಧವಾದ ಬೌದ್ಧಿಕ ದಾರಿದ್ರ್ಯ ಇಲ್ಲಿ ತಾಂಡವವಾಡಲು ಸಾಧ್ಯವಾಗುತ್ತಿದೆ. ಇಂತಹ ವಿಸನ್ನಿವೇಶದಲ್ಲಿ ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಕುರಿತ ಗಾಂಧಿ ಮೊದಲಾದ ಅನೇಕರ ವಿಜ್ಞಾನದ ಮಾತುಗಳು ಸಹ ಅಜ್ಞಾನದ ಮಾತುಗಳಾಗಿಯೇ ಕೇಳಲಾರಂಭಿಸಿದೆ.

ಇದಕ್ಕೆ ಪೂರಕವಾಗಿ ಮಾತ್ರ ಎರಡು ಮಾತು

ಭಾರತೀಯ ಭಾಷೆಗಳು ಸಾವಿರಾರು ವರ್ಷಗಳಿಂದ ಸಂಸ್ಕೃತ ಮೊದಲಾದ ಒಂದೆರಡು ಸಾಮ್ರಾಜ್ಯಶಾಹಿ ಭಾಷೆಗಳ ಎದುರಿನಲ್ಲಿ ಉಳಿದು ಬಂದಿವೆ. ಹೀಗೆ ಇಲ್ಲಿಯವರೆಗೂ ಉಳಿದು ಬಂದಿರುವುದಕ್ಕೆ ಮುಖ್ಯ ಕಾರಣ, ಅಂದು ಶಿಕ್ಷಣ ಎಂಬುದು ಕೆಲವರಿಗೆ ಮಾತ್ರ ಸೀಮಿತ ಎಂಬುದು. ಆದ್ದರಿಂದ ಅಕ್ಷರ ವಂಚಿತ ಬಹುಜನ ಸಮುದಾಯವು ಸಹಜವಾಗಿಯೇ ದೇಶ ಭಾಷೆಗಳ ಮೂಲಕ ಉಸಿರಾಡುತ್ತಾ, ಆ ಉಸಿರನ್ನೇ ಇಲ್ಲಿಯವರೆಗೂ ಉಳಿಸಿಕೊಂಡು ಬರಲು ಸಾಧ್ಯವಾಯಿತು. ಆದರೆ ಪ್ರಜಾಪ್ರಭುತ್ವದ ಈ ದಿನಗಳಲ್ಲಿ ಶಿಕ್ಷಣವೆಂಬುದು ಸಾರ್ವಜನಿಕ ವಲಯದ್ದಾಗಿದೆ. ಆದ್ದರಿಂದ ಹೆಚ್ಚು ಜನರನ್ನು ಮುಟ್ಟುತ್ತಿರುವ ಇಂದಿನ ಶಿಕ್ಷಣವು ಇಂಗ್ಲೀಷನ್ನು ಮಾತ್ರ ಮೇಲುಗಣ್ಣಿನಿಂದ ನೋಡುತ್ತಿರುವುದರಿಂದ ತಾನು ಅಡಿಯಲ್ಲಿ ಎಡವುತ್ತಿರುವುದು ತಕ್ಷಣಕ್ಕೆ ಗೊತ್ತಾಗುತ್ತಿಲ್ಲವಾಗುತ್ತಿದೆ. ಹೀಗಾಗಿ ಸಾವಿರಾರು ವರ್ಷಗಳಿಂದ ಉಳಿದು ಬಂದಿರುವ ಸಂಸ್ಕೃತಿ ವಾಹಕ ಭಾಷೆಗಳು ತಮ್ಮ ಮೂಲಕ ತಮ್ಮ ಸಾಂಸ್ಕೃತಿಕ ಅನನ್ಯತೆಗೂ ಆತಂಕವನ್ನು ತಂದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಹಲವು ಭ್ರಮೆಗಳನ್ನು ಸೃಷ್ಟಿಸಿರುವ ವ್ಯಾಪಾರ, ಖಾಸಗಿ ಮತ್ತು ಜಾಗತಿಕ ವಲಯಗಳಲ್ಲಿ ‘ಶೆಟ್ಟಿ’ ಸ್ಥಾನ ಗಳಿಸಿರುವ ಇಂಗ್ಲಿಷ್ ತೃತೀಯ ಜಗತ್ತನ್ನು ನಿಯಂತ್ರಿಸುವಂತಾಗಿದೆ.

ಹೀಗಾಗಿ ಜಾಗತೀಕರಣದ ರೂಪದಲ್ಲಿ ಭಾರತವನ್ನು ಆಳಲಾರಂಭಿಸಿರುವ ಇಂಗ್ಲೀಷ್ ಸಾಮ್ರಾಜ್ಯಶಾಹಿಯು ಭಾರತದ ಭಾಷಿಕ ಪ್ರಜಾಸತ್ತೆಗೆ ತೀವ್ರ ಆತಂಕವನ್ನು ಒಡ್ಡುತ್ತಿದೆ. ಇದರಿಂದ ಭಾರತದ ಅಮೂಲ್ಯ ಮಾನವ ಸಂಪನ್ಮೂಲವೂ ಬೌದ್ಧಿಕವಾಗಿ ಕ್ಷೀಣವಾಗುತ್ತಿದೆ.

ಆರ್ಥಿಕ ನೆಲೆ

ಜಾಗತೀಕರಣದ ಆರ್ಥಿಕ ಕ್ರಮಗಳಿಂದ ಈಗಾಗಲೇ ಅನೇಕ ದೇಶಗಳು ದಿವಾಳಿಯಾಗಿವೆ. ಆದ್ದರಿಂದ ಅಲ್ಲಿಂದ ಕಾಲ್ತೆಗೆದ ಕಂಪನಿಗಳು ತಮ್ಮ ಗಮನವನ್ನು ಭಾರತದಂತಹ ದೇಶಗಳೆಡೆಗೆ ಚಾಚಿವೆ. ಇದಕ್ಕೆ ಪೋಷಕವಾಗಿ ಭಾರತದ ತಲೆಯೂ ನಿಲ್ಲಲಾರದಾಗಿದೆ.
ಯಾವುದೇ ವ್ಯಾಪಾರ ಮತ್ತು ವಾಣಿಜ್ಯ ಕಂಪೆನಿಗೆ ಲಾಭವೇ ಮುಖ್ಯವಾಗಿರುತ್ತದೆ ಎನ್ನುವುದೇ ಪ್ರಾಥಮಿಕ ವಿಚಾರ. ಈ ಆಶಯಕ್ಕೆ ಪೂರಕವಾಗುವ ದೇಶ ಅದರ ಆಯ್ಕೆಯಾಗಿರುತ್ತದೆ. ಆದ್ದರಿಂದ ಸಂಪನ್ಮೂಲಗಳ ಲಭ್ಯತೆ ಅಲ್ಲಿ ಬರಿದಾದಾಗ ತಾನು ಅಲ್ಲಿಂದ ಕಾಲ್ತೆಗೆಯುತ್ತದೆ. ಅಂತಹ ಸಂದರ್ಭದಲ್ಲಿ ತನ್ನಿಂದ ದಿವಾಳಿಯಾದ ದೇಶದ ಬಗೆಗಿನ ಋಣದ ಪ್ರಶ್ನೆಯಾಗಲೀ, ಮಾನವೀಯತೆಯ ಸ್ಪಂದನವಾಗಲೀ ಅಲ್ಲಿ ಉಳಿದಿರಲು ಸಾಧ್ಯವಿಲ್ಲ. ಕಾರಣ, ಊಳಿಗಮಾನ್ಯ ಪ್ರಭುಗಳಿಗಿಂತ ಬಂಡವಾಳಶಾಹಿ ಪ್ರಭುಗಳು ಕಠಿಣವಾಗಿರುತ್ತಾರೆ. ಆದ್ದರಿಂದ ಲಾಭದ ಗಳಿಕೆ ಕಡಿಮೆಯಾದಂತೆ ಅಥವಾ ಆ ಉತ್ಪಾದಕ ರಾಷ್ಟ್ರ ದಿವಾಳಿಯಾಗುತ್ತಿದ್ದಂತೆ ತಾನು ಆ ದೇಶಕ್ಕೆ ವಿಮುಖವಾಗುವುದು ಸಹಜ.

ಈ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಅನೇಕ ವಿದೇಶಿ ಕಂಪೆನಿಗಳು ಹಾಗೂ ವಿದೇಶಿ ಮೂಲದ ಸ್ಥಳೀಯ ಸಹಭಾಗಿತ್ವದ ಕಂಪೆನಿಗಳು ಅಂದಿನ ಒಂದು ಈಸ್ಟ್ ಇಂಡಿಯಾ ಕಂಪೆನಿಯ ಜಾಗದಲ್ಲಿ ಇಂದಿನ ಭಾರತವನ್ನು ಆರ್ಥಿಕವಾಗಿ ಸುಲಿಯಲಾರಂಭಿಸಿವೆ. ಆದ್ದರಿಂದ ಇಲ್ಲಿಯ ಸಂಪನ್ಮೂಲಗಳು ವಿದೇಶಿ ಬಂಡವಾಳಶಾಹಿಗಳ ಸಂಘಟನೆಯಲ್ಲಿ ದೇಶೀ ಕಾರ್ಮಿಕರಿಂದಲೇ ಉತ್ಪಾದನ ವಸ್ತುಗಳಾಗಿ ಮಾರ್ಪಟ್ಟು ಅಧಿಕ ಲಾಭಕ್ಕೆ ವಿದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬರುತ್ತಿರುವ ಲಾಭವು ಸಹ ಸಹಜವಾಗಿಯೇ ಈ ಕಂಪೆನಿಗಳ ತವರಿಗೇ ರವಾನೆಯಾಗುತ್ತಿದೆ.

ಹೀಗೆ ಭಾರತವನ್ನು ತನ್ನ ಕೈಗಾರಿಕಾ ವಸಾಹತುವನ್ನಾಗಿ ಮಾರ್ಪಡಿಸಿಕೊಂಡಿರುವ ವಿದೇಶಿ ಕಂಪೆನಿಗಳು ದೇಶೀ ಕಂಪೆನಿಗಳಿಗೆ ಸವಾಲಾಗಿ ಮಾರ್ಪಟ್ಟಿವೆ. ಇದರಿಂದ ಅನೇಕ ಕೈಗಾರಿಕೆಗಳು ಈಗಾಗಲೇ ಮುಚ್ಚುವ ಹಂತವನ್ನು ತಲುಪಿವೆ. ಇದರೊಂದಿಗೆ ಖಾಸಗೀಕರಣದ ಪ್ರಕ್ರಿಯೆಯೂ ಸೇರಿ ಮೈಸೂರು ಲ್ಯಾಂಪ್ಸ್, ಎಚ್.ಎ.ಎಲ್., ಎನ್.ಜಿ.ಇ.ಎಫ್. ಮೊದಲಾದ ಕೈಗಾರಿಕೆಗಳು ನಷ್ಟದ ಹಾದಿಯನ್ನು ಹಿಡಿದಿವೆ. ಇಂತಹ ರಾಹು ಇತ್ತೀಚೆಗೆ ವಿಮಾ ಕ್ಷೇತ್ರಕ್ಕೂ ತಲೆ ಹಾಕುತ್ತಿದೆ ಎಂಬುದು ತಿಳಿದೇ ಇದೆ.

ಹೀಗಾಗಿ ಜಾಗತೀಕರಣದಿಂದ ದೊಡ್ಡ ಕೈಗಾರಿಕೆಗಳಿಗೆ ಮಾತ್ರವಲ್ಲದೆ ಸಣ್ಣ ಕೈಗಾರಿಕೆಗಳಿಗೂ ಆತಂಕ ಒದಗುತ್ತಿದೆ. ಇಲ್ಲಿಯೇ ದೊಡ್ಡ ಸಂಖ್ಯೆಯಲ್ಲಿರುವ ಕಾರ್ಮಿಕ ಸಮುದಾಯವು ಉದ್ಯೋಗದ ಅಭದ್ರತೆಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದೆ. ಇನ್ನು ವಿದೇಶಿ ಮೂಲದ ಖಾಸಗಿ ಕಂಪೆನಿಗಳಲ್ಲಿ ಸಹ ಅತ್ಯಂತ ಕಡಿಮೆ ಸಂಖ್ಯೆಯ ಜನರಿಗೆ ಮಾತ್ರ ಅಧಿಕ ಸಂಬಳವಿರುವುದು ಭ್ರಮೆಯನ್ನೊಡೆಯುವ ಸತ್ಯವಾಗಿದೆ. ಆದ್ದರಿಂದ ಅಲ್ಲಿಯೂ ಬಹುಸಂಖ್ಯಾತ ಜನರಿಗೆ ಕಡಿಮೆ ಸಂಬಳವೇ ಇರುವುದು ವೇದ್ಯಗೊಳ್ಳುತ್ತದೆ. ಇಂತಹ ಎಡೆಯಲ್ಲಿ ಮನುಷ್ಯ ಯಂತ್ರ ಮಾತ್ರವಾಗಿ, ಶ್ರಮದ ಮಾನವೀಕರಣವು ದೂರವಾಗಿದೆ. ಪರಿಣಾಮವಾಗಿ ದೂರಗಾಮಿ ದೃಷ್ಟಿಯುಳ್ಳ ಉದ್ಯೋಗಿಗಳಿಗೆ ನಿರುದ್ಯೋಗದ ಆತಂಕ ಇತ್ತೀಚೆಗೆ ಕಾಡಲಾರಂಭಿಸಿದೆ.

ಹೀಗೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗುತ್ತಿರುವ ವಿದೇಶಿ ಮತ್ತು ಸ್ವದೇಶೀಯ ಖಾಸಗಿ ಬಂಡವಾಳಶಾಹಿಗಳು ಇಂಡಿಯಾದ ಜಾಯಮಾನಕ್ಕೊಗ್ಗುವ ಮತ್ತು ಸಂವಿಧಾನವೇ ಸೂಚಿಸಿರುವ ಸಾಮಾಜಿಕ ನ್ಯಾಯ ಕಲ್ಪನೆಯನ್ನು ಇಲ್ಲಿ ಗಾಳಿಗೆ ತೂರಿವೆ. ಇದರಿಂದ ಸಾಮಾಜಿಕ ಹಾಗೂ ಆರ್ಥಿಕ ಅಸಮತೋಲನವು ಮತ್ತೂ ಮುಂದುವರೆದು ವಿನೂತನ ಸಮಸ್ಯೆಗಳಿಗೆ ದಾರಿಮಾಡುತ್ತಿದೆ. ಇದಕ್ಕೆ ಪೋಷಕ ಎನ್ನುವಂತೆ ಸರ್ಕಾರವು ಮಾರುತಿ ಮೊದಲಾದ ಕಂಪೆನಿಗಳಲ್ಲಿ ಹೂಡಿದ್ದ ತನ್ನ ಷೇರುಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಖಾಸಗಿಯವರ ಸಾಮ್ರಾಜ್ಯಕ್ಕೆ ತನ್ನನ್ನು ರಬ್ಬರ್ ಸ್ಟಾಂಪನ್ನಾಗಿಸಿಕೊಳ್ಳುತ್ತಿದೆ. ಈ ಪ್ರಕ್ರಿಯೆಯ ಅಂತಿಮ ಭಾಗವಾಗಿ ವಿಧಾನಸೌಧ, ಪಾರ್ಲಿಮೆಂಟುಗಳು ನಾಳೆಯೆ ಖಾಸಗೀಕರಣಗೊಂಡರೆ ಆಶ್ಚರ್ಯಪಡಬೇಕಾಗಿಲ್ಲ.

ದೇಶದ ಕೈಗಾರಿಕಾ ಕ್ಷೇತ್ರದ ಸ್ಥಿತಿ ಕೃಷಿ ಕ್ಷೇತ್ರದ್ದೂ ಆಗಿದೆ. ಬೆಲೆ ಕುಸಿತದಿಂದಾಗಿ ರೈತರ ಆತ್ಮಹತ್ಯೆ, ಕಳಪೆ ಬೀಜಗಳ ಮಾರಾಟ, ಹೈಬ್ರಿಡ್ ತಳಿಗಳಿಂದ ಪೌಷ್ಠಿಕಾಂಶದ ಇಳಿಮುಖ ಮುಂತಾದ ಸುದ್ದಿಗಳು ಇತ್ತೀಚಿಗೆ ಬಿಸಿಯಾಗುತ್ತಿವೆ. ಇದರ ಜೊತೆಗೆ ಜಾಗತೀಕರಣ ಮತ್ತು ಖಾಸಗೀಕರಣಗಳ ಸಮ್ಮೋಹನಾಸ್ತ್ರ ಹಳ್ಳಿಯನ್ನು ಘಾತಿಸಿರುವುದರಿಂದ ಅಲ್ಲಿ ಅಧಿಕ ಜನರಿದ್ದರೂ ಶ್ರಮಿಕರ ಕೊರತೆ ಎಂಬ ವಿಸಂಗತಿ ಎದ್ದುಕಾಣುವಂತಾಗಿದೆ.

ಹೀಗೆ ಪ್ರಗತಿಯ ಹೆಸರಿನ ಜಾಗತೀಕರಣವು ಇಂದಿರಾಗಾಂಧಿಯವರ ರಾಷ್ಟ್ರೀಕರಣದ ಕ್ರಿಯೆಗೆ ವಿರುದ್ಧವಾಗಿ ಭಾರತದ ಆರ್ಥಿಕ ಜಗತ್ತನ್ನು ಅತ್ಯಂತ ಯಶಸ್ವಿಯಾಗಿ ಸಾಗಿಸುತ್ತಿರುವುದರಿಂದ ಪ್ರಜ್ಞಾವಂತರ ಅಸಹಾಯಕತೆಯು ಹೆಚ್ಚಾಗುತ್ತಿದೆ.

ರಾಜಕೀಯ ನೆಲೆ

ಜಾಗತೀಕರಣದಿಂದ ಭಾರತದ ಪರಮಾಧಿಕಾರವು ಕ್ಷೀಣವಾಗುತ್ತಿದೆ. ಆದರೂ ಇದರ ಪ್ರಜ್ಞೆ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುವುದಿಲ್ಲ. ಈ ಕ್ರಿಯೆ ಎಲ್ಲಾ ವಿಧದಲ್ಲೂ ಭಾಷೆ, ಸಂಸ್ಕೃತಿ, ಸರ್ವೋದಯ, ಸಮನ್ವಯ ಮೊದಲಾದ ತತ್ವಗಳನ್ನೊಳಗೊಂಡ ಭಾರತದ ಪ್ರಜಾಸತ್ತೆಗೆ ಮಾರಕವಾಗುತ್ತಿರುವುದಲ್ಲದೆ ಅದರ ಅನನ್ಯತೆಗೂ ತೀವ್ರ ಧಕ್ಕೆಯನ್ನು ತರುತ್ತಿದೆ. ಇದರಿಂದ ಸಂವಿಧಾನವೂ ಇಲ್ಲಿ ನೆಪಮಾತ್ರವಾಗುತ್ತಿದೆ. ಅದರ ಪರಿಣಾಮವಾಗಿ ಅಧಿಕಾರಶಾಹಿಯ ಕ್ರಮಗಳು ಸ್ವದೇಶಿ ತತ್ವಗಳನ್ನು ಅಪ್ರಸ್ತುತವನ್ನಾಗಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ವಲಯ-ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಾ ಸಾಗಿರುವ ನಮ್ಮ ನಾಯಕರು ಭಾರತವನ್ನು ತಾವು ನಾಯಕರಾಗಿದ್ದುಕೊಂಡು ಆಳದೆ ಮೇನೇಜರ್‌ಗಳಾಗಿ ಆಳಲು ತೊಡಗುತ್ತಿದ್ದಾರೆ. ಆದ್ದರಿಂದ ನಾಯಕರ ಜಾಗದಲ್ಲಿ ಬಂಡವಾಳಶಾಹಿ ಪ್ರಭುಗಳು ಪ್ರತಿಷ್ಠಿತರಾಗುತ್ತಿದ್ದಾರೆ. ಹೀಗೆ ರಾಜಶಾಹಿಯಿಂದ ಬಿಡುಗಡೆ ಪಡೆದು, ಬ್ರಿಟಿಷರ ಕಾಲದಲ್ಲಿ ಸ್ವತಂತ್ರಗೊಂಡು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ಭಾರತವು ಇಂದು ಅದರ ಜಾಗದಲ್ಲಿ ಬಂಡವಾಳಶಾಹಿ ಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಳ್ಳುತ್ತಿರುವುದರಿಂದ ಭಾರತದ ರಾಜಕೀಯ ಇತಿಹಾಸಕ್ಕೆ ಹೊಸ ವಿನ್ಯಾಸವೊಂದು ಏರ್ಪಡುವಂತಾಗಿದೆ.

ಒಟ್ಟಾರೆ ಜಾಗತೀಕರಣದ ಪ್ರಕ್ರಿಯೆಯು ರಾಜಕೀಯವಾದ ಸ್ವಾತಂತ್ರ್ಯವನ್ನು ಸಹ ನಿಧಾನವಾಗಿ ಕಬಳಿಸುತ್ತಿರುವುದರಿಂದ ಮತ್ತೊಂದು ವಿಧವಾದ ಅಪೂರ್ವ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತೀಯರನ್ನು ಸಜ್ಜುಗೊಳಿಸುತ್ತಿದೆ. ಇದರೊಂದಿಗೆ ಭಾರತದ ಸೋದರ ರಾಷ್ಟ್ರಗಳು ಸಹ ಇದೇ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ಸ್ವಾತಂತ್ರ್ಯ ಸಂಗ್ರಾಮ ಎಂಬುದು ಈ ಬಾರಿ ಜಾಗತಿಕ ಸಂಗ್ರಾಮವಾಗಿ ಮಾರ್ಪಡುತ್ತದೆ. ಈ ನಿಟ್ಟಿನಲ್ಲಿ ಕಣ್ಣುಳ್ಳವರು ಈಗಾಗಲೇ ಹೋರಾಟವನ್ನು ಆರಂಭಿಸಿದ್ದಾರೆ ಎನ್ನುವುದು ಸಮಕಾಲೀನ ಸಂದರ್ಭದ ಜಾಗತಿಕ ಸತ್ಯವಾಗಿ ಅಲ್ಲಲ್ಲಿ ಮಿಂಚುತ್ತಿದೆ.
*****
ಒತ್ತಾಸೆ : ೨೦೦೦ದ ಕೊನೆಯ ಭಾಗದಲ್ಲಿ ‘ಪ್ರಗತಿ ರಂಗ’ವು ಕೋಲಾರದಲ್ಲಿ ಸಂಘಟಿಸಿದ್ದ ‘ಜಾಗತೀಕರಣ ಮತ್ತು ಭಾರತ’ ಎಂಬ ವಿಚಾರ ಸಂಕಿರಣದಲ್ಲಿ ಮಾಡಿದ ಆಶಯ ಭಾಷಣ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾತಗೆ ಮೊಬೈಲ್ ಪಾಠ
Next post ಬಂಡೆದ್ದು ಬದುಕೇವು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys